ಏಷ್ಯದ ಇತಿಹಾಸ: ಏಷ್ಯದ ಇತಿಹಾಸ ಐದಾರು ಸಾವಿರ ವರ್ಷಗಳಷ್ಟು ದೀರ್ಘವಾದದ್ದು. ಸಂಕುಚಿತಾರ್ಥದಲ್ಲಿ ಏಷ್ಯವೆಂದರೆ ಏಜಿಯನ್ಗೆ ಪುರ್ವಕ್ಕಿದ್ದ ರೋಮನರ ಪ್ರಾಂತ್ಯ; ಆಗ ಇದರಲ್ಲಿ ಮಿಸಿಯ, ಲಿಡಿಯ, ಕೇರಿಯ ಮತ್ತು ಫ್ರಿಜಿಯಗಳು ಅಡಕವಾಗಿದ್ದುವು. ಕಾಲಕ್ರಮೇಣ ಏಷ್ಯ ಪ್ರಾಂತ್ಯದಲ್ಲಿ ರೋಮನ್ನರು ಅನೇಕ ಬದಲಾವಣೆಗಳನ್ನು ಮಾಡಿದರು. ಈಗ ಇಡೀ ಖಂಡಕ್ಕೇ ಏಷ್ಯ ಎಂಬ ಹೆಸರಿದೆ.

ಏಷ್ಯದ ಜನಾಂಗಗಳಲ್ಲಿ ಏಕರೂಪತೆ ಇಲ್ಲ. ಉದಾಹರಣೆಗೆ ತುರ್ಕಿಯವರು, ಭಾರತೀಯರು, ಚೀನಿಯರು ಮತ್ತು ಜಪಾನೀಯರ ನಡುವೆ ಅನೇಕ ವ್ಯತ್ಯಾಸಗಳಿವೆ. ಏಷ್ಯದಲ್ಲಿನ ಸಂಸ್ಕೃತಿಗಳ ಹಿನ್ನೆಲೆಯನ್ನು ಅಭ್ಯಾಸ ಮಾಡಿದಾಗ ವ್ಯಕ್ತಿಗಳು ಪ್ರಧಾನವಲ್ಲ. ಸಮಾಜದಲ್ಲಿನ ಕುಟುಂಬಜೀವನವೂ ರಾಜಕೀಯ ಜೀವನವೂ ವಿಶಿಷ್ಟವಾಗಿ ಎದ್ದು ಕಾಣುತ್ತವೆ. ಆದ್ದರಿಂದ ಏಷ್ಯದ ಇತಿಹಾಸವೂ ಸರಳವಾದ ಹಾಗೂ ವಿಶಾಲವಾದ ರೂಪರೇಷೆಗಳನ್ನು ಪಡೆದಿದೆ. ಯುರೋಪಿನ ಇತಿಹಾಸಕ್ಕಿಂತಲೂ ಏಷ್ಯದ ಇತಿಹಾಸ ಬಹಳ ದೊಡ್ಡದು. ಆದರೆ ಏಷ್ಯದ ಇತಿಹಾಸವನ್ನು ಸಮಗ್ರವಾಗಿ ನೋಡಿದಾಗ ಯುರೋಪಿಯನ್ನರ ಇತಿಹಾಸದಲ್ಲಿ ಕಂಡುಬರುವಂಥ ಕುತೂಹಲಪುರ್ಣ, ವಿಶಿಷ್ಟ ಘಟನಾವಳಿಗಳೂ ವ್ಯಕ್ತಿಗಳೂ ಕಂಡುಬರುವುದಿಲ್ಲವೆನ್ನಬಹುದು. ಆದರೂ ಏಷ್ಯದ ಇತಿಹಾಸದಲ್ಲಿ ಬರುವ ಚೆಂಗೇಸ್ಖಾನ್ ಮತ್ತು ತೈಮೂರರು ನೆಪೋಲಿಯನ್ ಮತ್ತು ಹಿಟ್ಲರರನ್ನೂ ಮೀರಿಸಿದವರೆನ್ನಬಹುದು. ಅಷ್ಟೇ ಅಲ್ಲ, ವಿಶ್ವದ ಇತಿಹಾಸದ ಮೇಲೆ ಪ್ರಭಾವ ಬೀರಿದ ಯೇಸು, ಬುದ್ಧ, ಮಹಮ್ಮದರಂಥವರು ಹುಟ್ಟಿ ಬಾಳಿದ್ದು ಏಷ್ಯದಲ್ಲಿ. ಹಿಂದೂ, ಬೌದ್ಧ, ಕ್ರಿಸ್ತ, ಇಸ್ಲಾಂ, ಜುಡಾಯಿಸಮ್, ಪಾರ್ಸಿ, ಟಾವೊ ಮುಂತಾದ ಧರ್ಮಗಳು ಹುಟ್ಟಿದ್ದೂ ಏಷ್ಯದಲ್ಲೆ.
ಬ್ಯಾಬಿಲೋನಿಯ ನಾಗರಿಕತೆಯನ್ನು ಬಿಟ್ಟರೆ, ಪ್ರ.ಶ.ಪು. 1500ಕ್ಕಿಂತ ಹಿಂದಿನ ಏಷ್ಯನ್ ಇತಿಹಾಸವನ್ನು ಸಮಗ್ರವಾಗಿ ಅಭ್ಯಾಸ ಮಾಡುವುದು ಕಷ್ಟ. ಏಕೆಂದರೆ ಆ ಕಾಲಕ್ಕೆ ಸಂಬಂಧಿಸಿದಂತೆ ದೊರೆತಿರುವ ಆಧಾರಗಳು ಸ್ವಲ್ಪ. ಹೆಚ್ಚಾಗಿ ಊಹೆಯಿಂದಲೇ ಮುಂಚಿನ ಇತಿಹಾಸವನ್ನು ಚಿತ್ರಿಸಿಕೊಳ್ಳಬೇಕಾಗಿದೆ. ಭಾರತದಲ್ಲಿ ಪ್ರ.ಶ.ಪು. 5000 ವರ್ಷಗಳಷ್ಟು ಹಿಂದೆ ಇದ್ದ ಹರಪ್ಪ-ಮೊಹೆಂಜೋದಾರೊ ನಾಗರಿಕತೆ ಬೆಳಕಿಗೆ ಬಂದಿದೆ. ಸು. ಪ್ರ.ಶ.ಪು. 1500ರ ವೇಳೆಗೆ ಚೀನಿಯರು ಹ್ವಾಂಗ್ ಹೊ ನದಿಯ ತೀರದಲ್ಲಿ ಬಂದು ನೆಲೆಸುತ್ತಿದ್ದರು; ಆರ್ಯರು ಭಾರತವನ್ನು ಪ್ರವೇಶಿಸುತ್ತಿದ್ದರು; ಬ್ಯಾಬಿಲೋನಿಯದ ಕೀರ್ತಿ ಮತ್ತು ಪ್ರಭಾವ ಅತಿ ಹೆಚ್ಚಿನದಾಗಿತ್ತು.

ಏಷ್ಯದ ರಾಷ್ಟ್ರಗಳು ಪಾಶ್ಚಾತ್ಯರ ಹತೋಟಿಗೆ ಬಂದ ವಿಷಯವನ್ನು ಬಿಟ್ಟು, ಸು. 2000 ವರ್ಷಗಳ ಏಷ್ಯದ ಇತಿಹಾಸದಲ್ಲಿ ಪ್ರಮುಖವಾಗಿ ಚೀನೀ, ಭಾರತೀಯ, ಮುಸ್ಲಿಂ ಮತ್ತು ಮಧ್ಯ ಏಷ್ಯ-ಹೀಗೆ ನಾಲ್ಕು ಪ್ರಭಾವಗಳನ್ನು ಕಾಣಬಹುದು. ಇವುಗಳಲ್ಲಿ ಮೊದಲ ಮೂರು ಪ್ರಭಾವಗಳು ಭಿನ್ನ ಸಂಸ್ಕೃತಿಗಳ ಪ್ರತೀಕಗಳಾಗಿವೆ. ನಾಲ್ಕನೆಯದು ನವೀನವಲ್ಲದಿದ್ದರೂ ವಿವಿಧ ಜನಾಂಗಗಳನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯುವುದರಲ್ಲೂ ರಾಜಕೀಯ ಬಲವನ್ನು ಹಂಚುವುದರಲ್ಲೂ ಹೆಚ್ಚಿನ ಪಾತ್ರ ವಹಿಸಿದೆ.

ಪೂರ್ವ ಏಷ್ಯದ ನಾಗರಿಕತೆಗಳ ಮೇಲೆ ಚೀನ ತನ್ನದೇ ಆದ ಮುದ್ರೆಯನ್ನೊತ್ತಿದೆ. ಕೊರಿಯ, ಜಪಾನ್ ಮತ್ತು ವಿಯೆಟ್ನಾಂಗಳು ಚೀನದ ನೇರ ಪ್ರಭಾವಕ್ಕೆ ಒಳಗಾದ ಪ್ರದೇಶಗಳು. ಹೊರವಲಯದಲ್ಲಿ ಮಂಗೋಲಿಯ, ಟಿಬೆಟ್, ಸಯಾಂ, ಕಾಂಬೋಡಿಯ ಮತ್ತು ಮಯನ್ಮಾರ್ಗಳಿವೆ. ಈ ಪ್ರದೇಶಗಳಲ್ಲಿ ಭಾರತೀಯ ಹಾಗೂ ಚೀನೀ ನಾಗರಿಕತೆಗಳ ಪ್ರಭಾವಗಳು ಸಮ್ಮಿಶ್ರಗೊಂಡಿವೆ. ಭಾರತೀಯರ ಪ್ರಭಾವ ಸ್ವಲ್ಪ ಹೆಚ್ಚಿನದು ಎಂದೇ ಹೇಳಬಹುದು. ಚೀನೀಯರ ಪ್ರಭಾವ ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಕನ್ಫ್ಯೂಷಿಯನ್ ಧರ್ಮ ಪ್ರಮುಖವಾಯಿತು. ಇದರ ಜೊತೆಗೆ ವಿಶಿಷ್ಟ ಚೀನೀ ಕಲೆಯೂ ಬರೆವಣಿಗೆಯ ಕ್ರಮವೂ ಹಬ್ಬಿದುವು.

ಭಾರತೀಯ ಪ್ರಭಾವ ಮುಖ್ಯವಾಗಿ ಬೌದ್ಧಧರ್ಮದ ಪ್ರಸಾರದಿಂದ ಬಂದದ್ದು ಎನ್ನಬಹದು. ಇಂಡೋ-ಚೀನ, ಮಲೆಯ ಪರ್ಯಾಯದ್ವೀಪ, ಟಿಬೆಟ್ ಮತ್ತು ಮಂಗೋಲಿಯಗಳು ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟ ಪ್ರದೇಶಗಳು. ಚೀನ ಮತ್ತು ಜಪಾನ್ ದೇಶಗಳು ಹೆಚ್ಚಾಗಿ ಬೌದ್ಧಧರ್ಮವನ್ನು ಅವಲಂಬಿಸಿದ್ದರಿಂದ, ಆ ದೇಶಗಳೂ ಭಾರತದ ಸಂಸ್ಕೃತಿಯ ಪ್ರಭಾವ ವಲಯಕ್ಕೊಳಗಾದ ಪ್ರದೇಶಗಳೆಂದು ಹೇಳಬಹುದು. ಆದರೆ ಈ ಪ್ರಭಾವ ಪರಸ್ಪರವಲ್ಲ. ಏಕೆಂದರೆ ಚೀನೀಯರ ಕಲೆ, ಸಾಹಿತ್ಯ ಅಥವಾ ಧರ್ಮನೀತಿ ಯಾವುದೂ ಭಾರತದ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿಲ್ಲ. ಆದರೆ ಬೌದ್ಧಧರ್ಮದ ಪ್ರಭಾವ ಧರ್ಮಕ್ಕೆ ಮಾತ್ರವೇ ಸೀಮಿತಗೊಳ್ಳದೆ, ಅದರ ಜೊತೆಗೆ ಭಾರತೀಯ ಕಲೆ ಮತ್ತು ಸಾಹಿತ್ಯವೂ ಜಾವ ಕಾಂಬೋಡಿಯಗಳಲ್ಲಿ ಅವರ ವರ್ಣಮಾಲೆಯೂ ಪ್ರಭಾವ ಬೀರಿದುವು.

ಇಸ್ಲಾಂ ಧರ್ಮ ಪಶ್ಚಿಮ ಏಷ್ಯದಲ್ಲಿ ಹೆಚ್ಚು ಪ್ರಭಾವಯುತವಾಯಿತು. ಇಂದಿಗೂ ಅದು ಆ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನಾಂಗದ ಮುಖ್ಯ ಧರ್ಮ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಇಸ್ಲಾಂ ಪ್ರಬಲಗೊಂಡಿತು. ಇಂದಿಗೆ ಒಟ್ಟು ಜನಸಂಖ್ಯೆಯ 1/5ರಷ್ಟು ಜನ ಆ ಧರ್ಮದ ಅನುಯಾಯಿಗಳಾಗಿದ್ದಾರೆ. ಭಾರತದಿಂದ ಪುರ್ವಕ್ಕೆ ಮಲೆಯ ಮತ್ತು ಇಂಡೋನೇಷ್ಯಗಳಿಗೆ ಈ ಧರ್ಮ ಹಬ್ಬಿ ಅಲ್ಲಿದ್ದ ಹಿಂದೂ ಧರ್ಮದ ಪ್ರಭಾವವನ್ನು ಮೀರಿ ತನ್ನ ಪ್ರಾಬಲ್ಯ ಸ್ಥಾಪಿಸಿತು. ಇಂಡೋ-ಚೀನದಲ್ಲಾಗಲಿ, ಜಪಾನಿನಲ್ಲಾಗಲಿ, ಇಸ್ಲಾಂ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ. ಚೀನದ ಸಿಂಕಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಮರಿದ್ದಾರೆ. ಇಸ್ಲಾಂ ತನ್ನದೇ ಆದ ಕಲೆ ಮತ್ತು ನಾಗರಿಕತೆಗಳನ್ನು ಈ ಪ್ರದೇಶಗಳಿಗೆ ಕೊಂಡೊಯ್ದಿದೆ. ಅರಬ್ಬೀ ಅಕ್ಷರಮಾಲೆ ಮತ್ತು ಅರಬ್ಬೀ ಭಾಷೆ, ಪದಸಂಪತ್ತು ಎಲ್ಲವೂ ಇಸ್ಲಾಂ ಧರ್ಮದೊಡನೆ ಈ ಪ್ರದೇಶಕ್ಕೆ ಬಂದವು.

ಮಧ್ಯ ಏಷ್ಯದ ಅನೇಕ ಜನಾಂಗಗಳು ಏಷ್ಯದ ಇತಿಹಾಸದಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರೂ ಅವಕ್ಕೆ ಸಾಮಾನ್ಯವಾದ ಒಂದೇ ಹೆಸರಿಲ್ಲದೆ ಇರುವುದರಿಂದ ಅವುಗಳ ಪಾತ್ರವನ್ನು ಇತಿಹಾಸದಲ್ಲಿ ಗುರುತಿಸುವುದು ಕಷ್ಟದ ಕೆಲಸ. ತುರ್ಕಿಯವರು, ಮಂಗೋಲರು ಮತ್ತು ಹೂಣರು ಎಂದು ಈ ಜನಾಂಗಗಳನ್ನು ಗುರುತಿಸಬಹುದು. ಪ್ರಸಕ್ತಶಕದ ಆರಂಭದಲ್ಲಿ ಮಧ್ಯ ಏಷ್ಯ ಕುದಿದೆದ್ದು, ಇಲ್ಲಿನ ಜನ ಹಲವಾರು ದಾಳಿಗಳಿಗೆ ಕಾರಣರಾದರೂ; ಆವರ್ಗಳೂ (ಪ್ರ.ಶ.ಸು. 600-900) ಹೂಣರೂ (ಪ್ರ.ಶ.ಸು. 400-500) ಬಲ್ಗೇರಿಯನ್ನರೂ (ಪ್ರ.ಶ.ಸು. 7ನೆಯ ಶತಮಾನ) ಯುರೋಪಿನ ಮೇಲೆ ಮಾಡಿದ ಆರಂಭದ ದಾಳಿಗಳೂ ಮಂಗೋಲರು ರಷ್ಯದ ಮೇಲೆ ನಡೆಸಿದ ದಾಳಿಯೂ ತೈಮೂರನ ದಂಡಯಾತ್ರೆಯೂ ತುರ್ಕರ ಪಶ್ಚಿಮ ಏಷ್ಯನ್ ಮತ್ತು ಪುರ್ವ ಯುರೋಪಿಯನ್ ಆಕ್ರಮಣವೂ ಮೊಘಲರ ಭಾರತದ ಆಕ್ರಮಣವೂ ಕೂಬ್ಲಖಾನನ ನೇತೃತ್ವದಲ್ಲಿ ಮಂಗೋಲರು ಚೀನದ ಮೇಲೆ ನಡೆಸಿದ ಆಕ್ರಮಣವೂ ಅನಂತರ ಮಂಚುಗಳ ಚೀನದೇಶದ ಆಕ್ರಮಣವೂ ಉದಾಹರಣೆಗಳು. ಇವುಗಳ ಜೊತೆಗೆ ಭಾರತ, ಚೀನ ಮತ್ತು ಪರ್ಷಿಯಗಳ ಮೇಲೆ ಮಧ್ಯ ಏಷ್ಯದ ಬುಡಕಟ್ಟಿನವರು ನಡೆಸಿದ ಸಣ್ಣಪುಟ್ಟ ದಂಡಯಾತ್ರೆಗಳನ್ನೂ ಸೇರಿಸಬಹುದು.
ಆಡಳಿತಕ್ಕಿಂತ ಹೆಚ್ಚಾಗಿ ಯುದ್ಧಪ್ರೇಮಿಗಳಾಗಿದ್ದ ಈ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸತತವಾಗಿ ಹೋಗುತ್ತಿದ್ದುದರಿಂದ ಇವರು ಧರ್ಮೀಯ ಹಾಗೂ ಸಾಂಸ್ಕೃತಿಕ ಭಾವನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವ ಮಧ್ಯವರ್ತಿಗಳಾದರು. ಭಾರತದಲ್ಲಿ ಇಸ್ಲಾಂ ಧರ್ಮವೂ ಯುರೋಪಿನಲ್ಲಿ ಗ್ರೀಕ್-ಬ್ಯಾಕ್ಟ್ರಿಯನ್ ನಾಗರಿಕತೆಯೂ ಹಬ್ಬಲು ಇವರೇ ಕಾರಣರೆನ್ನಬಹುದು.

ಮಧ್ಯ ಏಷ್ಯದಲ್ಲಿ ಚೀನ, ಭಾರತ, ಇರಾನ್ ಮತ್ತು ಗ್ರೀಕ್ ಸಂಸ್ಕೃತಿಗಳ ಮಿಶ್ರಣದಿಂದುಂಟಾದ ಒಂದು ಸಂಸ್ಕೃತಿ ಇದ್ದ ವಿಷಯ ಈಚಿನ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ; ಬೌದ್ಧ, ಕ್ರೈಸ್ತ ಮತ್ತು ಮ್ಯಾನಕಿಯ ಶಾಸನಗಳೂ ಹಲವಾರು ಕಡೆ ವಿವಿಧ ಭಾಷೆಗಳ ಗ್ರಂಥಭಂಡಾರಗಳೂ ದೊರೆತಿವೆ.

ಇವೆಲ್ಲ ಹೆಚ್ಚಾಗಿ ಏಷ್ಯದ ಈಚಿನ ಇತಿಹಾಸಕ್ಕೆ ಸಂಬಂಧಪಟ್ಟವು. ಆದರೆ ಅತ್ಯಂತ ಪುರ್ವಕಾಲದಲ್ಲಿ ಬ್ಯಾಬಿಲೋನಿಯ ಮತ್ತು ಅಸ್ಸೀರಿಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದುವು. ಪ್ರ.ಶ.ಪು. 7ನೆಯ ಶತಮಾನದ ವೇಳೆಗೆ ಈ ರಾಜ್ಯಗಳು ಕ್ಷೀಣಸ್ಥಿತಿಗೆ ಬಂದುವು. ಅವುಗಳ ಸ್ಥಾನವನ್ನು ಪರ್ಷಿಯನ್ ಸಾಮ್ರಾಜ್ಯ ಆಕ್ರಮಿಸಿಕೊಂಡಿತು. ಸುಮೇರಿಯನ್ ನಾಗರಿತೆಯೂ ವೈಶಿಷ್ಟ್ಯಪುರ್ಣವಾದದ್ದು. ಪ್ರ.ಶ.ಪು. 4000 ದಷ್ಟು ಹಿಂದಿನ ಬರೆವಣಿಗೆಗಳನ್ನು ಸುಮೇರಿಯನ್ನರು ನಮಗೆ ಬಿಟ್ಟುಹೋಗಿದ್ದಾರೆ. ಯುಫ್ರೆಟೀಸ್ ಮತ್ತು ಟೈಗ್ರಿಸ್ ನದಿಗಳ ನಡುವಣ ಫಲವತ್ತಾದ ಪ್ರದೇಶ (ಮೆಸೊಪೊಟೇಮಿಯ) ಅನೇಕ ನಾಗರಿಕತೆಗಳ ತೊಟ್ಟಿಲಾಗಿತ್ತು. ಬ್ಯಾಬಿಲೋನಿನ ಹಮುರಬಿ (ಪ್ರ.ಶ.ಪು. 2123-2081) ನ್ಯಾಯವಾದಿ ಎಂದು ಹೆಸರಾಗಿದ್ದಾನೆ. ಪ್ರ.ಶ.ಪು. 1950ರ ವೇಳೆಗೆ ಹಿಟ್ಟೈಟರು ಸಿರಿಯ, ಪಶ್ಚಿಮ ಏಷ್ಯಗಳನ್ನೊಳಗೊಂಡ ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದರು. ಅವರ ಬರೆವಣಿಗೆಯನ್ನು ಸಂಪುರ್ಣವಾಗಿ ಇನ್ನೂ ಓದಲು ಸಾಧ್ಯವಾಗಿಲ್ಲ. ಪ್ರ.ಶ.ಪು. 9 ಮತ್ತು 10ನೆಯ ಶತಮಾನಗಳ ವೇಳೆಗೆ ಅಸ್ಸೀರಿಯನರು ಪ್ರಬಲರಾದರು. ಇವರು ಬ್ಯಾಬಿಲೋನಿಯರ ಬುಡಕಟ್ಟಿಗೆ ಸೇರಿದವರಾಗಿದ್ದರೂ ವಿಶಿಷ್ಟವಾದ ಕಲೆ ಮತ್ತು ಧರ್ಮ ಹೊಂದಿದ್ದರು. ಪರ್ಷಿಯನರು ಅಸ್ಸೀರಿಯನರನ್ನು ಪ್ರ.ಶ.ಪು. 606ರಲ್ಲಿ ಸೋಲಿಸಿದರು. ಪರ್ಷಿಯನ್ ಚಕ್ರವರ್ತಿ ಸೈರಸ್ ಪ್ರ.ಶ.ಪು. 555ರಲ್ಲಿ ಬ್ಯಾಬಿಲೋನ್ ಪಟ್ಟಣವನ್ನು ತನ್ನ ಕೈವಶಮಾಡಿಕೊಂಡ. ಅಸ್ಸೀರಿಯ ಪ್ರಮುಖವಾಗಿ ಬಲದ ಮೇಲೆ ನಿಂತಿದ್ದರಿಂದ, ಪರ್ಷಿಯನರ ದಾಳಿಗೆ ತುತ್ತಾದಾಗ ಅದು ಸಂಪುರ್ಣ ನಾಶವಾಯಿತು.

 ಚೀನ 
ಏಷ್ಯದಲ್ಲಿ ಚೀನ ಅತ್ಯಂತ ಪ್ರಾಚೀನ ದೇಶ. ಚೀನದ ಇತಿಹಾಸ ಪ್ರ.ಶ.ಪು. 12ನೆಯ ಶತಮಾನಕ್ಕೂ ಹಿಂದೆ ಹೋಗುತ್ತದೆ. ಚೀನೀಯರ ಉಗಮದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ. ಆದರೆ ಅವರು ಪಶ್ಚಿಮದಿಂದ ಬಂದರೆಂದು, ಹ್ವಾಂಗ್ ಹೋ ನದಿಯ ತೀರದಲ್ಲಿ ಸು.ಪ್ರ.ಶ.ಪು. 3000ದಲ್ಲಿ ಬಂದು ನೆಲೆಸಿದರೆಂದು ಖಚಿತವಾಗಿ ಹೇಳಬಹುದು. ಇತಿಹಾಸದ ಪ್ರಾರಂಭದಲ್ಲಿ ಚೀನದಲ್ಲಿ ಚಿಕ್ಕಪುಟ್ಟ ಪಾಳೆಯಪಟ್ಟುಗಳಿದ್ದವು. ಪ್ರ.ಶ.ಪು. ಸುಮಾರು 220ರಲ್ಲಿ ಟ್ಸಿನ್ ಅಥವಾ ಚಿನ್ (ಚೀನ ಎಂಬ ಹೆಸರು ಬಂದದ್ದು ಇದರಿಂದ) ಎಂಬ ರಾಜ್ಯ ಉದಯವಾಗಿ ಸಣ್ಣಪುಟ್ಟ ಪಾಳೆಯಪಟ್ಟುಗಳನ್ನು ಅದು ತನ್ನ ಹತೋಟಿಯಲ್ಲಿಟ್ಟುಕೊಂಡಿತು. ಹ್ಯಾನ್ ಸಾಮ್ರಾಜ್ಯ (ಪ್ರ.ಶ.ಪು. 206ರಿಂದ ಪ್ರ.ಶ. 220) ಉದಯವಾಗುವವರೆಗೂ ಚೀನದಲ್ಲಿ ಆಂತರಿಕ ಕಲಹ ಸಾಮಾನ್ಯವಾಗಿತ್ತು. ಹ್ಯಾನ್ ಮತ್ತು ಟಾಂಗ್ (ಪ್ರ.ಶ. 618-907) ರಾಜರುಗಳ ಕಾಲದಲ್ಲಿ ಚೀನದ ಸ್ಥಿತಿ ಉತ್ತಮಗೊಂಡಿದ್ದಲ್ಲದೆ ಇದು ಏಷ್ಯದಲ್ಲೆ ಒಂದು ಪ್ರಬಲ ದೇಶವಾಯಿತು. 13ನೆಯ ಶತಮಾನದಲ್ಲಿ ಕೂಬ್ಲಖಾನನ ಸಾಮ್ರಾಜ್ಯ ಒಂದು ಶತಮಾನದಷ್ಟು ಕಾಲ ಬಾಳಿತು. ಚೀನೀ ಮಿಂಗ್ ವಂಶೀಯರು ಅನಂತರ 300 ವರ್ಷ ಆಳಿದರು. 1644ರಲ್ಲಿ ಉತ್ತರದ ಜನಾಂಗದವರಾದ ಮಂಚುಗಳು ರಾಜಧಾನಿ ಪೀಕಿಂಗನ್ನು ಆಕ್ರಮಿಸಿ, 1912ರ ವರೆಗೆ ಚೀನವನ್ನಾಳಿದರು. ಆ ವರ್ಷ ಕ್ರಾಂತಿಯ ಪರಿಣಾಮವಾಗಿ ರಾಜಾಧಿಕಾರ ಕೊನೆಗೊಂಡು ಗಣರಾಜ್ಯ ಸ್ಥಾಪಿತವಾಯಿತು. ದೇಶವನ್ನು ಆಳುವ ಹಕ್ಕು ಒಂದೇ ರಾಜವಂಶಕ್ಕೆ ಸೀಮಿತವಾಗಿರಲಿಲ್ಲ. ಪ್ರ.ಶ.ದ ಆದಿಯಿಂದ ಚೀನವನ್ನಾಳಿದ ರಾಜವಂಶಗಳ ಸಂಖ್ಯೆ ಸು. 20. ಇವು ಅನೇಕ ವೇಳೆ ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ರಾಜಕೀಯ ಹತೋಟಿಗೆ ಒಳಪಡಿಸಿಕೊಂಡಿದ್ದುವು. ಚೀನೀ ತತ್ತ್ವಜ್ಞರಲ್ಲಿ ಕನ್ಪ್ಯುಷಿಯಸ್ (ಪ್ರ.ಶ.ಪು. 551-478) ಬಹಳ ಪ್ರಖ್ಯಾತ. ಚೀನೀಯರ ಕುಟುಂಬಜೀವನ, ರಾಜಕೀಯ ಹಾಗೂ ಸಾಮಾಜಿಕ ಪದ್ಧತಿಗಳ ಮೇಲೆ ಆತನ ಪ್ರಭಾವ ಬಹಳ ಹೆಚ್ಚಿನದು. ಮಾನವಾನುಕಂಪಿ, ಶಾಂತಿದೂತ ಎಂದು ಕನ್ಪ್ಯುಷಿಯಸ್ ಹೆಸರಾಗಿದ್ದಾನೆ.
ಮುಖ್ಯವಾಗಿ ಭಾರತದಿಂದ ಸಂಸ್ಕೃತಿಯನ್ನು ಪಡೆದ ಟಿಬೆಟ್ 8ನೆಯ ಶತಮಾನದಲ್ಲಿ ಮಧ್ಯ ಏಷ್ಯದ ಸಾಮ್ರಾಜ್ಯವೆಂದು ಹೆಸರು ಗಳಿಸಿ, ಅನಂತರ ಚೀನದ ರಾಜಕೀಯದ ಪ್ರಭಾವಕ್ಕೆ ಒಳಪಟ್ಟು ತನ್ನ ಸ್ವಾತಂತ್ರ್ಯ ಕಳೆದುಕೊಂಡಿತು. ಭಾರತದಿಂದ ಬೌದ್ಧಧರ್ಮ ಟಿಬೆಟಿಗೆ ಹೋಯಿತು. ಪೋಪನಂತೆ ಮಠಾಧಿಪತಿಗಳಾದ ಲಾಮಗಳು ಲೌಕಿಕ ಪ್ರಪಂಚದಲ್ಲೂ ಮುಖ್ಯರಾಗಿ ಅಧಿಕಾರ ನಡೆಸಿದರು. 

ಮಂಗೋಲರು ಚೀನವನ್ನು ಮತ್ತು ಯುರೋಪಿನ ಅನೇಕ ಭಾಗಗಳನ್ನು ಆಕ್ರಮಣ ಮಾಡಿದ್ದರು. ಅನೇಕ ಮಂಗೋಲರು ರಷ್ಯದಲ್ಲಿ ವಾಸಿಸುತ್ತಿದ್ದಾರೆ. ಅವರ ಮೂಲ ಸಂಸ್ಕೃತಿ ಭಾರತೀಯ ಮತ್ತು ಚೀನೀ ಸಂಸ್ಕೃತಿಗಳ ಸಂಮಿಶ್ರಣವಾಗಿತ್ತು. ಅವರು ಉಪಯೋಗಿಸುತ್ತಿದ್ದ ಅಕ್ಷರಮಾಲೆ ಸಿರಿಯ ಅಕ್ಷರಮಾಲೆಯಿಂದ ಬಂದದ್ದು. ಇದನ್ನು ನೆಸ್ಟೋರಿಯನ್ ಪಾದ್ರಿಗಳು ಮಂಗೋಲಿಯಕ್ಕೆ ತಂದಿದ್ದರು.

 ಜಪಾನ್ 
ಜಪಾನ್ ಏಷ್ಯದ ಒಂದು ಮುಖ್ಯ ದೇಶ. ಐನಸ್ ಜನಾಂಗದವರು ಜಪಾನಿನ ಮೂಲನಿವಾಸಿಗಳು. ಕಾಲಕ್ರಮೇಣ ಈ ಜನಾಂಗದವರನ್ನು ಉತ್ತರದ ದ್ವೀಪಗಳಿಗೆ ಒತ್ತರಿಸಲಾಯಿತು. ಅವರು ಜಪಾನೀಯರೊಡನೆ ನಡೆಸಿದ ಯುದ್ದಗಳು ಐತಿಹಾಸಿಕವಾದರೂ ನಮಗೆ ಅವುಗಳ ಬಗ್ಗೆ ಸಾಕಷ್ಟು ಆಧಾರಗಳು ದೊರೆತಿಲ್ಲ. ಜಪಾನೀಯರು ಎಲ್ಲಿಂದ ಬಂದರೆಂದು, ಯಾವಾಗ ಬಂದರೆಂದು ಹೇಳುವುದು ಕಷ್ಟ, ಜಪಾನೀಯರದು ಒಂದು ಮಿಶ್ರ ಜನಾಂಗ. ಮಧ್ಯ ಏಷ್ಯ ಮತ್ತು ಮಲಯ ಅಥವಾ ಪಾಲಿನೇಷಿಯದ ಜನಾಂಗದವರ ಸಂಮಿಶ್ರಣದಿಂದ ಜಪಾನೀಯರು ಬಂದಿರಬಹುದು. 6ನೆಯ ಶತಮಾನದಲ್ಲಿ ಚೀನೀ ನಾಗರಿಕತೆ ಮತ್ತು ಬೌದ್ಧಧರ್ಮ ಜಪಾನಿಗೆ ಬಂದ ಕಾಲದಿಂದ ಜಪಾನೀಯರ ಇತಿಹಾಸ ನಿರ್ದಿಷ್ಟವಾಗಿ ಪ್ರಾರಂಭವಾಗುತ್ತದೆ. ಕೊರಿಯದ ಮೂಲಕ ಚೀನೀ ನಾಗರಿಕತೆ ಜಪಾನಿಗೆ ಹಬ್ಬಿತು. ಕೆಲವೇ ಪಾಳೆಯಗಾರರ ಮನೆತನದವರು ಚಕ್ರವರ್ತಿಯನ್ನು ಬದಿಗೊತ್ತಿ, 645ರಲ್ಲಿ ಚೀನೀ ಸರ್ಕಾರಕ್ಕೆ ಅನುವರ್ತಿಯಾದ ರಾಜ್ಯವೊಂದನ್ನು ಕಟ್ಟಿದರು. ಫೂಜಿವಾರ ಮನೆತನದವರು ಮೊದಲಿಗೆ ಅಧಿಕಾರಕ್ಕೆ ಬಂದರು. ಅನಂತರ ತೈರಾ ಮತ್ತು ಮಿನಮೋಟೊ ಮನೆತನಗಳ ನಡುವೆ ಪೈಪೋಟಿ ನಡೆಯಿತು. 1192ರಲ್ಲಿ ಮಿನಮೋಟೊ ಮನೆತನದವರು ಗೆದ್ದು ಒಂದು ದ್ವಂದ್ವ ಆಡಳಿತ ಸ್ಥಾಪನೆ ಮಾಡಿದರು. ಈ ಸರ್ಕಾರದ ರಚನೆಯಲ್ಲಿ ಹೆಸರಿಗೆ ಚಕ್ರವರ್ತಿ ಸಾರ್ವಭೌಮನಾದರೂ ನಿಜವಾದ ಅಧಿಕಾರ ಈ ಪಾಳೆಯಗಾರರ ಮನೆತನದವರ ಕೈಯಲ್ಲಿತ್ತು. ಈ ರೀತಿಯಲ್ಲಿ ಕಾಮಾಕುರಾ ನಗರದ ಹೋಜೋ ಉತ್ತರಾಧಿಕಾರಿಗಳು 1205ರಿಂದ 1333ರ ವರೆಗೆ ಆಡಳಿತ ನಡೆಸಿದರು. ಕೂಬ್ಲಖಾನ್ ದಂಡೆತ್ತಿ ಬಂದಾಗ ಅವನನ್ನು ತಡೆಗಟ್ಟಿ ಓಡಿಸಿದರು. ಅನಂತರ ಅಧಿಕಾರ ಆಷಿಕಾಗಾ ಮನೆತನಕ್ಕೆ ಹೋಯಿತು. 1338 ರಿಂದ 1565ರವರೆಗೆ ಆಳಿದ ಆಷಿಕಾಗಾ ಮನೆತನದವರು ಕಲೆ, ಸಂಸ್ಕೃತಿಗಳಿಗೆ ಬಹಳ ಪ್ರೋತ್ಸಾಹ ಕೊಟ್ಟು ಪ್ರಖ್ಯಾತರಾದರು. 16ನೆಯ ಶತಮಾನದ ಮಧ್ಯಭಾಗದಲ್ಲಿ ಪೋರ್ಚುಗೀಸರು ಜಪಾನಿಗೆ ಬಂದಾಗ ಅಲ್ಲಿ ಅನಾಯಕತ್ವ ತಲೆದೋರಿತ್ತು. ಪೋರ್ಚುಗೀಸರು ಜಪಾನಿನಲ್ಲಿ ಕ್ರೈಸ್ತಧರ್ಮ ಹರಡಲು ಯತ್ನಿಸಿದರು. ವೀರ ಹಿದೆಯೊಷಿ ಈ ಕಾಲದಲ್ಲಿ ಕೊರಿಯ ದೇಶದ ಮೇಲೆ ದಂಡಯಾತ್ರೆ ಕೈಗೊಂಡ. ಆದರೆ ಅಕಾಲಮರಣದಿಂದಾಗಿ ಅವನ ಯೋಜನೆ ಪುರ್ಣವಾಗಲಿಲ್ಲ. ಉತ್ತರಾಧಿಕಾರಿಯಾದ ಇಯೆಯಾಸು ಹೊರದೇಶಗಳ ಸಂಪರ್ಕವನ್ನು ಪುರ್ತಿ ಕಡಿದುಹಾಕಿದ. ಪರದೇಶಗಳನ್ನು ಗೆಲ್ಲುವ ಯೋಜನೆಯನ್ನು ತಳ್ಳಿಹಾಕಿ, ಕ್ರೈಸ್ತಧರ್ಮಕ್ಕೆ ಬಹಿಷ್ಕಾರ ಹಾಕಿ, ಪರಕೀಯರು ಜಪಾನಿಗೆ ಬರದಂತೆ ಮಾಡಿದ. ಮುಂದೆ ಸು. 216 ವರ್ಷಗಳ ಕಾಲ ಕೆಲವು ಡಚ್ಚರ ಮತ್ತು ಚೀನೀಯರ ವಿನಾ ಎಲ್ಲ ವಿದೇಶೀಯರಿಗೂ ಜಪಾನ್ ತನ್ನ ದ್ವಾರವನ್ನು ವ್ಯಾಪಾರಕ್ಕೆ ಮುಚ್ಚಿತ್ತು. 1845ರಲ್ಲಿ ಅಮೆರಿಕ ಜಪಾನನ್ನು ಬಗ್ಗಿಸಿತು. ಪರದೇಶೀಯರ ಆಗಮನಕ್ಕೆ ಎಡೆಕೊಡುವುದೇ ಮುಂತಾದ ವ್ಯಾಪಕ ಒಪ್ಪಂದಕ್ಕೆ ಒಡಂಬಡಿಸಿತು. ಐರೋಪ್ಯರೊಡನೆ ಹೋರಾಡಬೇಕಾದರೆ ಅವರಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆಯಬೇಕೆಂಬ ವಿಚಾರ ಜಪಾನಿಗೆ ಬಂದದ್ದು ಆಗ. ಐರೋಪ್ಯರ ಅನುಭವದಿಂದ ಅದು ಪಾಠ ಕಲಿತು, 1868ರಲ್ಲಿ ಏಷ್ಯದ ಇತಿಹಾಸದಲ್ಲಿ ಒಂದು ಹೊಸ ಯುಗವನ್ನೆ ಪ್ರಾರಂಭಮಾಡಿತು. 1867ರಲ್ಲಿ ಮೇಜಿ ದೊರೆಯ ವಂಶದ ಆಗಮನದಿಂದ ಪ್ರಾರಂಭವಾದ ಕ್ರಾಂತಿ ಜಪಾನನ್ನು ಒಂದು ಬಲಯುತ ಆಧುನಿಕ ರಾಷ್ಟ್ರವನ್ನಾಗಿ ಮಾಡಿತು. ಅಲ್ಲಿಂದ 1945ರ ವರೆಗೆ ಜಪಾನ್ ಏಷ್ಯದಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಲು ಹವಣಿಸಿ, ಅದರಲ್ಲಿ ಜಯಗಳಿಸಿ, ಎರಡನೆಯ ಮಹಾಯುದ್ಧದಲ್ಲಿ ಸಂಪುರ್ಣ ಸೋತು ಅನಂತರ ಹೊಸ ಹಾದಿ ಹಿಡಿಯಿತು.

 ಕೊರಿಯ 
ವರ್ಣ ಮತ್ತು ಭಾಷೆಗಳಲ್ಲಿ ಕೊರಿಯ ಉಳಿದ ರಾಷ್ಟ್ರಗಳಿಂದ ಭಿನ್ನವಾದ ರಾಷ್ಟ್ರವಾದರೂ ನಾಗರಿಕತೆಯ ಅಂಶಗಳನ್ನು ಚೀನದಿಂದ ಪಡೆಯಿತು. ಇತಿಹಾಸದ ಅನೇಕ ಘಟ್ಟಗಳಲ್ಲಿ ಅದು ಚೀನೀ ಸಾರ್ವಭೌಮತ್ವವನ್ನು ಒಪ್ಪಿಕೊಂಡಿತ್ತು. ಚೀನದ ಚಕ್ರವರ್ತಿಗಳಿಗೆ ಕಪ್ಪಕಾಣಿಕೆಗಳನ್ನು ಸಹ ಕೊಡುತ್ತಿತ್ತು. 16ನೆಯ ಶತಮಾನದಲ್ಲಿ ಸ್ವಲ್ಪ ಕಾಲದವರೆಗೆ ಜಪಾನೀಯರು ಕೊರಿಯವನ್ನು ಆಕ್ರಮಿಸಿಕೊಂಡಿದ್ದರು. 1894ರಲ್ಲಿ ಅದು ಸಂಪುರ್ಣ ಸ್ವಾತಂತ್ರ್ಯ ಪಡೆಯಿತು. ಆದರೆ ಆ ಸ್ವಾತಂತ್ರ್ಯ ಬಹು ಕಾಲ ಉಳಿಯಲಿಲ್ಲ. 1904-05ರಲ್ಲಿ ನಡೆದ ರಷ್ಯ-ಜಪಾನ್ ಯುದ್ಧದ ತರುವಾಯ ಜಪಾನೀಯರು 1910ರಲ್ಲಿ ಕೊರಿಯವನ್ನು ತಮ್ಮ ಸಂಪುರ್ಣ ಹತೋಟಿಗೆ ತಂದುಕೊಂಡು, ಆ ದೇಶವನ್ನು ಒಂದು ವಸಾಹತಿನಂತೆ ಆಳಿದರು.

 ಭಾರತ 
ಏಷ್ಯದ ಮುಖ್ಯ ದೇಶಗಳಲ್ಲಿ ಒಂದಾದ ಭಾರತಕ್ಕೆ ಸು. 5000 ವರ್ಷಗಳಿಗಿಂತ ಮಿಗಿಲಾದ ಭವ್ಯ ಇತಿಹಾಸವಿದೆ. ಭಾರತದ ಇತಿಹಾಸ ಸು. ಪ್ರ.ಶ.ಪು. 5000ಕ್ಕೂ ಹಿಂದೆ ಇದ್ದ ಸಿಂಧೂ ಕೊಳ್ಳದ ನಾಗರಿಕತೆಯಿಂದ ಪ್ರಾರಂಭವಾಗುತ್ತದೆ. ಪ್ರ.ಶ.ಪು. ಸು. 1500ರಲ್ಲಿ ಆರ್ಯರು ಭಾರತಕ್ಕೆ ವಲಸೆ ಬಂದು, ಗಂಗಾ ಬ್ರಹ್ಮಪುತ್ರಾ ನದಿಗಳ ತೀರಗಳಲ್ಲಿ ನೆಲಸಿ ಭವ್ಯ ವೈದಿಕ ಸಂಸ್ಕೃತಿಯನ್ನು ಸೃಷ್ಟಿಸಿ ಬೆಳೆಸಿದರು. ಹಿಂದೆ ಇದ್ದ ಸಿಂಧೂ ಕೊಳ್ಳದ ನಾಗರಿಕತೆಯನ್ನೂ ದ್ರಾವಿಡ ಸಂಸ್ಕೃತಿಯ ಕೆಲವು ಅಂಶಗಳನ್ನೂ ಆರ್ಯರು ತಮ್ಮ ಸಂಸ್ಕೃತಿಯಲ್ಲೂ ಅಳವಡಿಸಿಕೊಂಡು ಸಮಗ್ರ ಹಿಂದೂ ಸಂಸ್ಕೃತಿಗೆ ಬುನಾದಿ ಹಾಕಿದರು. ಮುಂದೆ 2,000 ವರ್ಷಗಳ ಕಾಲ ಭಾರತಕ್ಕೆ ಅನೇಕ ಜನಾಂಗಗಳವರು ವಲಸೆ ಬಂದರು. ಇದರಿಂದಾಗಿ ಬೇರೆ ಬೇರೆ ಸಂಸ್ಕೃತಿಗಳ ಕ್ರಿಯೆ ಪ್ರತಿಕ್ರಿಯೆ ನಡೆದು ಒಂದು ವಿಶಿಷ್ಟವಾದ ಸಂಸ್ಕೃತಿ ಬೆಳೆಯಲು ಅವಕಾಶವಾಯಿತು. ವೇದಗಳು ಕಾಲದಲ್ಲಿ ಜಾತಿ ಪದ್ಧತಿ, ಗ್ರಾಮಜೀವನ ವ್ಯವಸ್ಥೆ ಮತ್ತು ರಾಜಕೀಯ ಪದ್ಥತಿಗಳು ರೂಪುಗೊಂಡವು. ಪ್ರಖ್ಯಾತವಾದ, ವಿಪುಲವಾದ ದಾರ್ಶನಿಕ ಸಾಹಿತ್ಯ ನಿರ್ಮಾಣವಾಯಿತು. ಉಪನಿಷತ್ತುಗಳು, ವೇದ ವೇದಾಂಗಗಳು ಮತ್ತು ಪುರಾಣಗಳು ರಚಿತವಾದುವು. ಪ್ರ.ಶ.ಪು. 542-490ರಲ್ಲಿ ಮಗಧದಲ್ಲಿ ಆಳುತ್ತಿದ್ದ ಬಿಂದುಸಾರನದೇ ಮೊದಲನೆಯ ಮುಖ್ಯ ರಾಜ್ಯ.

ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ನಡೆಸಿದ್ದು ಪ್ರ.ಶ.ಪು.327ರಲ್ಲಿ ಆದರೆ ಅದರಿಂದ ಹೆಚ್ಚಿನ ಪರಿಣಾಮವೇನೂ ಆಗಲಿಲ್ಲ. ಚಂದ್ರಗುಪ್ತಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿ ಭಾg Àತದ ಇತಿಹಾಸದಲ್ಲೆ ಮೊದಲನೆಯ ಚಕ್ರವರ್ತಿ ಎಂಬ ಕೀರ್ತಿ ಪಡೆದ. ಈ ವಂಶದವನಾದ ಅಶೋಕ (ಪ್ರ.ಶ.ಪು.273-232) ಪ್ರಾಚೀನ ಭಾರತದ ಇತಿಹಾಸದಲ್ಲಿ ಶ್ರೇಷ್ಠ ರಾಜನೆಂದು ಗೌರವ ಗಳಿಸಿ, ಬೌದ್ಧಧರ್ಮ ದೇಶ ವಿದೇಶಗಳಲ್ಲಿ ಹರಡಲು ಪ್ರೋತ್ಸಾಹಿಸಿದ. ಅವನ ಕಾಲಾನಂತರ ಚಿಕ್ಕಪುಟ್ಟ ರಾಜ್ಯಗಳು ತಲೆ ಎತ್ತಿದುವು. 4 ಮತ್ತು 5ನೆಯ ಶತಮಾನಗಳಲ್ಲಿ ಉತ್ತರಭಾಗದಲ್ಲಿ ಗುಪ್ತ ಸಾಮ್ರಾಜ್ಯ ಪ್ರಸಿದ್ಧಿಗೆ ಬಂತು. ಈ ಕಾಲವನ್ನು ಭಾರತದ ಇತಿಹಾಸದಲ್ಲಿ ಸುವರ್ಣಯುಗವೆಂದು ಕರೆಯುತ್ತಾರೆ. ಈ ಯುಗದಲ್ಲಿ ಸಾಹಿತ್ಯ, ಕಲೆ, ವಿಜ್ಞಾನಗಳು ಹೆಚ್ಚಿನ ಪ್ರಗತಿ ಸಾಧಿಸಿದುವಲ್ಲದೆ, ಭಾರತೀಯ ಸಂಸ್ಕೃತಿ ಆಗ್ನೇಯ ಏಷ್ಯದ ರಾಷ್ಟ್ರಗಳಲ್ಲಿ ಹರಡಿತು. 7ನೆಯ ಶತಮಾನದಲ್ಲಿ ಹರ್ಷ ಚಕ್ರವರ್ತಿ ಸ್ವಲ್ಪ ಕಾಲ ಐಕ್ಯ ಸಾಧಿಸಿದ ತರುವಾಯ ಮತ್ತೆ ದೇಶದಲ್ಲೆಲ್ಲ ಚಿಕ್ಕಪುಟ್ಟ ರಾಜ್ಯಗಳು ತಲೆ ಎತ್ತಿಕೊಂಡುವು, ದಕ್ಷಿಣದಲ್ಲಿ ಚೋಳ, ಪಲ್ಲವ, ಚಾಲುಕ್ಯ, ಕದಂಬ, ಹೊಯ್ಸಳ, ರಾಷ್ಟ್ರಕೂಟ ಮೊದಲಾದ ಸಾಮ್ರಾಜ್ಯಗಳು ಹೊಮ್ಮಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಕಾಪಾಡಿಕೊಂಡು ಬಂದುವಲ್ಲದೆ, ಅದಕ್ಕೆ ವಿಶಿಷ್ಟ ರೀತಿಯ ಕಾಣಿಕೆಗಳನ್ನು ಸಲ್ಲಿಸಿದುವು.

ಉತ್ತರದಲ್ಲಿ ರಜಪುತರು 700ರಿಂದ 1000ವರೆಗೆ ಪ್ರಬಲರಾಗಿದ್ದರು. ಅವರ ತರುವಾಯ ಮುಸ್ಲಿಮರು ಭಾರತಕ್ಕೆ ದಂಡೆತ್ತಿ ಬಂದು 12ನೆಯ ಶತಮಾನದಲ್ಲಿ ದೆಹಲಿಯಲ್ಲಿ ಸಾಮ್ರಾಜ್ಯ ಸ್ಥಾಪಿಸಿದರು. 1526ರಲ್ಲಿ ಮೊಘಲ್ ಸಾಮ್ರಾಜ್ಯ ಬಾಬರನ ನೇತೃತ್ವದಲ್ಲಿ ಸ್ಥಾಪಿತವಾಯಿತು. ಈ ಕಾಲದಲ್ಲಿ ಹೊಸ ಹೊಸ ವಿಷಯಗಳು ಭಾರತಕ್ಕೆ ಬಂದುವು, ಕಲೆ, ಸಾಹಿತ್ಯ, ಸಾಮಾಜಿಕ ಜೀವನ, ರಾಜಕೀಯ ಜೀವನ, ಮತೀಯ ಜೀವನ-ಈ ಎಲ್ಲ ಕ್ಷೇತ್ರಗಳಲ್ಲೂ ಹಿಂದೂ ಮುಸ್ಲಿಂ ನಾಗರಿಕತೆಗಳ ಪರಸ್ಪರ ಮಿಲನದಿಂದ ಒಂದು ನವೀನ ನಾಗರಿಕತೆಯ ಪರಂಪರೆಯ ಹುಟ್ಟಿಕೊಂಡಿತು. ಸಮಗ್ರ ಭಾರತೀಯ ಸಂಸ್ಕೃತಿ ಮತ್ತಷ್ಟು ಶ್ರೀಮಂತವಾಯಿತು. ಮೊಘಲ ಸಾಮ್ರಾಜ್ಯ ಔರಂಗಜೇ಼ಬನ ಕಾಲಕ್ಕೆ ಉನ್ನತಮಟ್ಟಕ್ಕೇರಿ ಅನಂತರ ಅವನತಿಯ ಹಾದಿ ಹಿಡಿಯಿತು. ತಾಜ್ಮಹಲಿನಂಥ ವಿಶ್ವವಿಖ್ಯಾತ ಶಿಲ್ಪಕಲಾಕೌಶಲಗಳು ಭಾರತದಲ್ಲಿ ನಿರ್ಮಿತವಾದದ್ದು ಮೊಘಲರ ಕಾಲದಲ್ಲಿ. 18ನೆಯ ಶತಮಾನದಲ್ಲಿ ಭಾರತದಲ್ಲಿ ದೇಶಿಯ ಗುಂಪುಗಳಾದ ಮರಾಠಿ, ರಜಪುತ, ಸಿಖ್ ಮತ್ತು ಆಫ್ಘನರಿಗೂ ವಿದೇಶೀ ಗುಂಪುಗಳಾದ ಬ್ರಿಟಿಷ್ ಮತ್ತು ಫ್ರೆಂಚರಿಗೂ ನಡುವೆ ಅಧಿಕಾರಕ್ಕಾಗಿ ಹೋರಾಟಗಳಾಗಿ ಕಡೆಗೆ ಫ್ರೆಂಚರನ್ನು ಓಡಿಸಿದ ಬ್ರಿಟಿಷರು 19ನೆಯ ಶತಮಾನದ ವೇಳೆಗೆ ಇಡೀ ಭಾರತದಲ್ಲೇ ಪ್ರಬಲರಾದರು. 19ನೆಯ ಶತಮಾನದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕದಿಂದ ಜಾಗೃತಿಯುಂಟಾಗಿ, 20ನೆಯ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಭಾರತೀಯ 1947ರಲ್ಲಿ ಮಹಾತ್ಮಾ ಗಾಂಧಿಯ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆದರು.

 ಶ್ರೀಲಂಕ 
ಪ್ರ.ಶ.ಪು.6ನೆಯ ಶತಮಾನದಲ್ಲಿ ಆರ್ಯರು ಶ್ರೀಲಂಕದ ಮೇಲೆ ಆಕ್ರಮಣ ನಡೆಸಿದರೆಂಬುದು ಐತಿಹ್ಯ. ಅಶೋಕನ ಕಾಲದಲ್ಲಿ ಸಿಂಹಳ ಬೌದ್ಧಧರ್ಮದ ಕೇಂದ್ರವಾಗಿ ಮಯನ್ಮಾರ್ ಮತ್ತು ಥೈಲೆಂಡ್ಗಳಲ್ಲಿ ಪ್ರಭಾವ ಬೀರಿತು. ತಮಿಳರಿಗೂ ಶ್ರೀಲಂಕರಿಗೂ ನಡೆದ ಹೋರಾಟದ ಕಥೆಯೇ ಶ್ರೀಲಂಕದ ಮಧ್ಯಯುಗದ ಚರಿತ್ರೆ. 12ನೆಯ ಶತಮಾನದಲ್ಲಿ ಶ್ರೀಲಂಕ ರಾಜಮನೆತನವೊಂದು ಪ್ರಬಲವಾಗಿ ಆಡಳಿತ ನಡೆಸಿದ ಮೇಲೆ ಪೋರ್ಚುಗೀಸರು ಮತ್ತು ಅನಂತರ ಡಚ್ಚರು ಶ್ರೀಲಂಕದ ಮೇಲೆ ತಮ್ಮ ಹತೋಟಿ ಸ್ಥಾಪಿಸಿದರು. 1796ರಲ್ಲಿ ಬ್ರಿಟಿಷರು ಡಚ್ಚರನ್ನು ಓಡಿಸಿದರು. ಸ್ವಾತಂತ್ರ್ಯಗಳಿಸುವವರೆಗೂ (1948) ಶ್ರೀಲಂಕ ಬ್ರಿಟಿಷರ ಅಧೀನದಲ್ಲಿತ್ತು.

 ಪರ್ಷಿಯ 
ಪರ್ಷಿಯ ಅಥವಾ ಆಧುನಿಕ ಇರಾನ್ ಏಷ್ಯದ ಇತಿಹಾಸದಲ್ಲಿ ಮಹತ್ತ್ವದ ಪಾತ್ರವಹಿಸಿದೆ. ಮೂಲತಃ ಆರ್ಯರಾಗಿದ್ದ ಪರ್ಷಿಯನ್ನರು (ಹಿಂದೂಗಳಂತೆ) ಮಧ್ಯ ಏಷ್ಯದಿಂದ ಬಂದಿರಬಹುದು. ಪರ್ಷಿಯನ್ನರ ಧರ್ಮಕ್ಕೂ ಪ್ರಾಚೀನ ಭಾರತೀಯ ವೈದಿಕ ಧರ್ಮಕ್ಕೂ ಅನೇಕ ಸಾಮ್ಯಗಳಿವೆ. ಪ್ರ.ಶ.ಪು. 7ನೆಯ ಶತಮಾನದಲ್ಲಿದ್ದ ಜಾರತೂಷ್ಟ್ರ ಪರ್ಷಿಯನ್ನರ ಧರ್ಮವನ್ನು ಕ್ರೋಡೀಕರಿಸಿದ. ಸೈರಸ್, ಡೇರಿಯಸ್, ಸರ್ಕ್ಸಿಸ್ ಮೊದಲಾದ ಪರ್ಷಿಯನ್ ಚಕ್ರವರ್ತಿಗಳ ಕೈಕೆಳಗೆ ಪರ್ಷಿಯನ್ ಸಾಮ್ರಾಜ್ಯ ಏಷ್ಯ ಮೈನರಿನಿಂದ ಭಾರತದ ಗಡಿಯವರೆಗೆ ಹಬ್ಬಿತ್ತು. ಗ್ರೀಕರಿಂದ ಪರಾಜಿತರಾದ ಮೇಲೆ ಅವರ ಪ್ರಭಾವ ಕಡಿಮೆಯಾಯಿತು. 7ನೆಯ ಶತಮಾನದಲ್ಲಿ ಪರ್ಷಿಯ ಮುಸ್ಲಿಮರ ಆಕ್ರಮಣಕ್ಕೆ ತುತ್ತಾಗಿ ಇಸ್ಲಾಂ ಧರ್ಮವನ್ನು ಪ್ರಧಾನ ಧರ್ಮವಾಗಿ ಅಂಗೀಕರಿಸಿತು. ಮುಸ್ಲಿಮರ ಕಾಲದಲ್ಲಿ ಸಣ್ಣಪುಟ್ಟ ರಾಜವಂಶಗಳು ಉಳಿದುವು. ಹೆಚ್ಚಾಗಿ ಅರಾಜಕತೆ ನೆಲೆಸಿತ್ತು. 1585ರಿಂದ 1628ರ ವರೆಗೆ ಅಳಿದ ಅಬ್ಬಾಸ್ಷಾ ಚಕ್ರವರ್ತಿಯ ನೇತೃತ್ವದಲ್ಲಿ ಪರ್ಷಿಯ ಹೆಚ್ಚಿನ ಕೀರ್ತಿ ಮತ್ತು ವೈಭವ ಗಳಿಸಿತು. ಅನಂತರ ಕಾಲದಲ್ಲಿ ಆಘ್ಫನ್ನರ ಆಕ್ರಮಣದಿಂದಾಗಿ ಅನಾಯಕತ್ವ ಉಂಟಾಯಿತು. 1907ರ ಆಂಗ್ಲೊ-ರಷ್ಯನ್ ಒಪ್ಪಂದದ ಪ್ರಕಾರ ಪರ್ಷಿಯ ಸ್ವತಂತ್ರವಾಗಿರಬೇಕೆಂದು ತೀರ್ಮಾನಿಸಲಾಯಿತು. 1941ರಲ್ಲಿ ರಷ್ಯ-ಬ್ರಿಟಿಷ್ ಒಪ್ಪಂದ ಕೊನೆಗೊಂಡಿತು. ಅದರೊಡನೆ ಪರ್ಷಿಯದ ಮೇಲಿದ್ದ ದ್ವಂದ್ವ ರೀತಿಯ ನಿಯಂತ್ರಣವೂ ಕೊನೆಗೊಂಡಿತು. 
ತುರ್ಕಿ: 545ರಲ್ಲಿ ಮೊಟ್ಟಮೊದಲ ಬಾರಿಗೆ ಜೀವನ ಗಡಿಪ್ರದೇಶಗಳಲ್ಲಿ ಕಾಣಿಸಿಕೊಂಡ ತುರ್ಕಿ ಜನಾಂಗದವರು ಅನಂತರ ಏಷ್ಯ ಯುರೋಪ್ ಖಂಡಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ವೀಗುರ್ ಜನರೂ ಸೆಲ್ಜೂಕರೂ ಉಸ್ಮಾನ್ಲಿಗಳೂ ತುರ್ಕಿ ಜನಾಂಗದ ಮುಖ್ಯ ಆಕ್ರಮಣಕಾರಿ ಮತ್ತು ಯುದ್ಧ ಪ್ರೇಮಿ ಗುಂಪುಗಳು. 1453ರಲ್ಲಿ ಉಸ್ಮಾನ್ಲಿಗಳು ಕಾನ್ಸ್ಟ್ಯಾಂಟಿನೋಪಲ್ ನಗರವನ್ನು ಹಿಡಿದು. ಆಟೋಮನ್ ಸಾಮ್ರಾಜ್ಯ ಸ್ಥಾಪಿಸಿದರು. 1922ರಲ್ಲಿ ಇದು ಗಣರಾಜ್ಯವಾಗಿ ಪರಿವರ್ತನೆಗೊಂಡು ಅಂಕಾರವನ್ನು ರಾಜಧಾನಿಯಾಗಿ ಮಾಡಿಕೊಂಡು, ಐರೋಪ್ಯ ಸಂಸ್ಕೃತಿಯ ಆಚಾರ ವ್ಯವಹಾರಗಳನ್ನು ಸಂಪುರ್ಣವಾಗಿ ಅಳವಡಿಸಿಕೊಂಡಿತು. ಎರಡನೆಯ ಮಹಾಯುದ್ಧದಲ್ಲಿ ಫೆಬ್ರುವರಿ 1945ರ ವರೆಗೆ ತಟಸ್ಥವಾಗಿದ್ದು ಅನಂತರ ಜರ್ಮನಿ ಮತ್ತು ಜಪಾನ್ಗಳ ಮೇಲೆ ಯುದ್ಧ ಘೋಷಿಸಿತು.

 ಇಸ್ರೇಲ್ 
ಯಹೂದಿಗಳ ಮೂಲಸ್ಥಾನವಾದ ಇಸ್ರೇಲ್ ಅಥವಾ ಪ್ಯಾಲೆಸ್ಟೈನ್ ಏಷ್ಯದಲ್ಲಿದ್ದರೂ ಇತಿಹಾಸದ ಉದ್ದಕ್ಕೂ ಈ ಜನ ಬೇರೆ ದೇಶಗಳಲ್ಲಿ ಹಂಚಿ ಹೋಗಿದ್ದು, ವ್ಯಾಪಾರ ವಾಣಿಜ್ಯಗಳಲ್ಲಿ ಪ್ರಮುಖರಾಗಿದ್ದು, 1948ರಿಂದೀಚೆಗೆ ತಮ್ಮದೇ ಆದ ದೇಶ ರಚಿಸಿಕೊಂಡಿದ್ದಾರೆ (ನೋಡಿ- ಇಸ್ರೇಲ್).

 ಅರಬ್ಬರು 
ಪ್ರ.ಶ.ಪು.9ನೆಯ ಶತಮಾನದ ತರುವಾಯದ ಕಾಲದಲ್ಲಿ ಅರಬ್ಬರ ಹೆಸರು ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಕೇಳಿಬಂದಿತು. ಇಸ್ಲಾಂ ಧರ್ಮದ ಅಂತಿಮ ಸಂದೇಶವಾಹಕರಾದ ಪ್ರವಾದಿ  ಮುಹಮದನರಿಗಿಂತ ಮುಂಚೆ ಅರಬ್ಬರಿಗೆ ತಮ್ಮದೇ ಆದಂಥ ಇತಿಹಾಸವಿತ್ತು.ಪುರಾತನ ಹಿಬ್ರೂವಿನಿಂದ ಅರಬ್ಬೀ ವಿಕಸಿಸಿದೆ.
ಪುರಾತನ ಅರೆಬಿಯಾದಲ್ಲಿ ಶಬ್ದಗಳು ವಸ್ತುಗಳನ್ನು ಸೂಚಿಸುತಿದ್ದವು.ಉದಾ ಮೀನನ್ನು ನೂನ್,ಹಸುವನ್ನು ಅಲಿಫ್,ಬಾಗಿಲನ್ನು ಬಾಅ್,ಒಂಟೆಯನ್ನು ಜೀಮ್. ಇಸ್ಲಾಂ ಪ್ರಬಲವಾದ ತರುವಾಯ ಅರಬ್ಬರು ಆ ಧರ್ಮವನ್ನು ಆಗಿನ ಪ್ರಪಂಚದಲ್ಲೆಲ್ಲ ಹರಡುವ ಪ್ರಯತ್ನ ನಡೆಸಿದರು. ಪುರ್ವದಲ್ಲಿ ಭಾರತ, ಪರ್ಷಿಯ ಮತ್ತು ಮಧ್ಯ ಏಷ್ಯಗಳನ್ನೂ ಪಶ್ಚಿಮದಲ್ಲಿ ಸ್ಪೇನ್ ಮತ್ತು ಮೊರಾಕೊಗಳನ್ನೂ ಆಕ್ರಮಿಸಿದರು. ಡಮಾಸ್ಕಸಿನ ಓಮಯಾದ್ ಖಲೀಫರು ಮತ್ತು ಬಾಗ್ದಾದಿನ ಅಬ್ಬಾಸಿದ್ ಖಲೀಫರು ಪಶ್ಚಿಮ ಏಷ್ಯದಲ್ಲಿ ರಾಜಕೀಯ ಪ್ರಭಾವವನ್ನು ವಿಸ್ತರಿಸಿ ಪ್ರಖ್ಯಾತರಾದರು. ಐಕಮತ್ಯದ ಕೊರತೆಯಿಂದಾಗಿ ಚಕ್ರಾಧಿಪತ್ಯದ ಅನೇಕ ಭಾಗಗಳು ಸ್ವಾತಂತ್ರ್ಯ ಘೋಷಿಸಿದವು. ಉಳಿದಷ್ಟು ಭಾಗಗಳನ್ನು ತುರ್ಕಿಯವರು ವಶಪಡಿಸಿಕೊಂಡರು. ಅರಬ್ಬರು ಸ್ಪೇನಿನಲ್ಲೂ ಸ್ವಲ್ಪ ಕಾಲ ಆಳಿದರಲ್ಲದೆ ಯುರೋಪನ್ನು ಸಂಪುರ್ಣವಾಗಿ ತಮ್ಮ ಹತೋಟಿಗೆ ತಂದುಕೊಳ್ಳುವ ಯತ್ನ ನಡೆಸಿದರು. 15ನೆಯ ಶತಮಾನದವರೆಗೆ ಈ ಪ್ರಯತ್ನಗಳು ನಡೆದುವು. ಅನಂತರ ಅರಬ್ಬರ ರಾಜಕೀಯ ಪ್ರಾಬಲ್ಯ ಕುಸಿಯಿತು. ಆದಾಗ್ಯೂ ಅರಬ್ಬರ ಧರ್ಮೀಯ ಭಾವನೆಗಳು ಮತ್ತು ಸಾಹಿತ್ಯ ಪಶ್ಚಿಮ ಏಷ್ಯ ಮತ್ತು ಉತ್ತರ ಆಫ್ರಿಕಗಳಲ್ಲಿ ಪ್ರಬಲವಾದ ಮತ್ತು ಪ್ರಭಾವಯುತವಾದ ಶಕ್ತಿಗಳಾಗಿವೆ.

ಒಂದನೆಯ ಮಹಾಯುದ್ಧದ ತರುವಾಯ ಸವೂದಿ ಅರೇಬಿಯ ಪ್ರಾಮುಖ್ಯ ಗಳಿಸಿತು. ಅರಬ್ಬರಲ್ಲಿ ರಾಷ್ಟ್ರೀಯತೆಯ ಮನೋಭಾವ ಬೆಳೆಯಿತು. 1945ರಲ್ಲಿ ನಡೆದ ಮಾಲ್ಟ ಸಮ್ಮೇಳನದಲ್ಲಿ ಐರೋಪ್ಯ ಹಾಗೂ ಅಮೆರಿಕನ್ ನಾಯಕರು ಅರಬ್ಬರ ರಾಷ್ಟ್ರೀಯತೆಯ ಮನೋಭಾವಗಳನ್ನು ಗುರುತಿಸಿ ಸೂಕ್ತರೀತಿಯಲ್ಲಿ ನಡೆದುಕೊಳ್ಳುವ ಭರವಸೆ ಇತ್ತರು.

 ಆಗ್ನೇಯ ಏಷ್ಯ 
ಏಷ್ಯದ ಮತ್ತೊಂದು ಬುಡಕಟ್ಟಿನವರಾದ ಮಲೆಯರು ಮಲೆಯ ಪರ್ಯಾಯದ್ವೀಪ. ಜಾವ, ಸುಮಾತ್ರ ಮತ್ತು ಫಿಲಿಪೀನ್ಸ್‌ನಲ್ಲೂ ಅನೇಕ ಚಿಕ್ಕಪುಟ್ಟ ದ್ವೀಪಗಳಲ್ಲೂ ಫಾರ್ಮೋಸ ಮತ್ತು ಮಡಗಾಸ್ಕರ್ಗಳಲ್ಲೂ ಹರಡಿ ಹೋಗಿದ್ದಾರೆ. ಇಷ್ಟು ವಿಶಾಲವಾಗಿ ಹರಡಿರುವ ಈ ಜನರಿಗೆ ತಮ್ಮದೇ ಆದ ಏಕರೀತಿಯ ರಾಜ್ಯಾಂಗವಿಲ್ಲ. ಏಷ್ಯದ ಮಲೆಯರು ಸಮುದ್ರಯಾನ ಮಾಡುವುದರಲ್ಲಿ ಗಟ್ಟಿಗರು. ಈ ಜನಾಂಗದ ಇತಿಹಾಸದಲ್ಲಿ ಮುಖ್ಯವಾಗಿ ಮೂರು ಘಟ್ಟಗಳನ್ನು ಗುರುತಿಸಬಹುದು. ಮೊದಲನೆಯದು ಹಿಂದುಳಿದ ಸಂಸ್ಕೃತಿಯ ಪರಿಸ್ಥಿತಿ. ಈಗಿನ ಬೋರ್ನಿಯೊ ದ್ವೀಪಗಳಲ್ಲಿ ವಾಸಿಸುವ ದೇಶೀಯರಂತೆ ಇದ್ದದ್ದು. ಎರಡನೆಯ ಘಟ್ಟದಲ್ಲಿ ಈ ಜನಾಂಗದವರು ಜಾವ, ಸುಮಾತ್ರ ಮತ್ತು ಮಲೆಯಗಳಲ್ಲಿ ಹಿಂದೂ ಸಂಸ್ಕೃತಿಯಿಂದ ಪ್ರಭಾವಿತರಾದರು. ಸುಮಾತ್ರದಲ್ಲಿ ಉದಯವಾದ ಶ್ರೀ ವಿಜಯ ಸಾಮ್ರಾಜ್ಯ 7 ರಿಂದ 14ನೆಯ ಶತಮಾನದವರೆಗೆ ಬಹಳ ಪ್ರಸಿದ್ಧವಾಗಿತ್ತು. ಮೂರನೆಯ ಘಟ್ಟದಲ್ಲಿ, ಬಲಿದ್ವೀಪವನ್ನು ಬಿಟ್ಟು ಉಳಿದ ಎಲ್ಲ ಪ್ರದೇಶಗಳಲ್ಲೂ ಹಿಂದೂ ಧರ್ಮವನ್ನು ಹಿಂದಕ್ಕೆ ತಳ್ಳಿ ಇಸ್ಲಾಂ ಪ್ರಬಲಗೊಂಡಿತು. ಒಟ್ಟಿನಲ್ಲಿ ಮಲೆಯ ಜನಾಂಗದವರು ಆಗ್ನೇಯ ಏಷ್ಯದ ಆಧುನಿಕ ಇತಿಹಾಸದಲ್ಲಿ ಅಂಥ ಹೆಚ್ಚಿನ ಪಾತ್ರ ವಹಿಸಲಿಲ್ಲವೆನ್ನಬಹುದು.
ಆಗ್ನೇಯ ಏಷ್ಯದ ಉಳಿದ ಭಾಗಗಳಾದ ಮಯನ್ಮಾರ್, ಥೈಲೆಂಡ್ (ಸಯಾಂ), ಕಾಂಬೋಡಿಯ, ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಮತ್ತು ಲಾವೋಸ್ಗಳು ಹಿಂದಿನಿಂದಲೂ ಭಾರತೀಯ ಮತ್ತು ಚೀನೀ ಸಂಸ್ಕೃತಿಗಳಿಂದ ಪ್ರಭಾವಿತವಾಗಿವೆ. ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಾಂಗದವರು ಹತ್ತಾರು ಗುಂಪುಗಳಿಗೆ ಸೇರಿದವರಾಗಿದ್ದಾರೆ. ಇತಿಹಾಸದಲ್ಲಿ ಮೊದಲು ಪ್ರಾಮುಖ್ಯ ಗಳಿಸಿದವರೆಂದರೆ ಖ್ಮೆರ್ ಜನಾಂಗದವರು. 800-1200ರಲ್ಲಿ ಖ್ಮೆರ್ ಸಾಮ್ರಾಜ್ಯ ಉನ್ನತ ಸ್ಥಿತಿಯಲ್ಲಿತ್ತೆನ್ನಬಹುದು. 2ನೆಯ ಶತಮಾನದಲ್ಲಿ ಸ್ಥಾಪಿತವಾದ, ಈಗಿನ ವಿಯಟ್ನಾಂ ಪ್ರದೇಶದಲ್ಲಿದ್ದ ಚಂಪ ಸಾಮ್ರಾಜ್ಯ ಇಂಡೋಚೀನದಲ್ಲೆಲ್ಲ ಪ್ರಸಿದ್ಧವಾಗಿ ಹಿಂದೂ ಸಂಸ್ಕೃತಿಯಿಂದ ಪ್ರಭಾವಿತವಾಗಿ ಅನೇಕ ಕಲಾಕೌಶಲಗಳನ್ನು ರಚಿಸಲು ಪ್ರೋತ್ಸಾಹಿಸಿತು. ಜಾವದ ಮುಖಾಂತರ ಹಿಂದೂ ಸಂಸ್ಕೃತಿ ಚಂಪಕ್ಕೆ ಹೋಗಿರಬಹುದು. ವಿಯಟ್ನಾಮಿನಲ್ಲಿ ವಾಸಿಸುವ ಅನ್ನಾಮೀಯರು ಚಂಪ ರಾಜ್ಯವನ್ನು ನಾಶಗೊಳಿಸಿ ವಿಯಟ್ನಾಮಿನ ಮೇಲೆ ತಮ್ಮ ಪ್ರಭಾವ ಬೀರಿದರು. ಇವರು ಚೀನಿ ಸಂಸ್ಕೃತಿಯಿಂದ ಪ್ರಭಾವಿತರಾದರು. ಮಯನ್ಮಾರರು ಟಿಬೆಟಿನ ಜನಾಂಗದ ಗುಂಪಿಗೆ ಸೇರಿದವರಾಗಿದ್ದು ಈಗಿನ ಮಯನ್ಮಾರ್ನಲ್ಲಿ 12, 16 ಮತ್ತು 18ನೆಯ ಶತಮಾನಗಳಲ್ಲಿ ಪ್ರಸಿದ್ಧ ಸಾಮ್ರಾಜ್ಯ ಕಟ್ಟಿ, 19ನೆಯ ಶತಮಾನದ ವೇಳೆಗೆ ಬ್ರಿಟಿಷರಿಗೆ ಶರಣಾಗತರಾದರು. ಬರ್ಮೀಯರು ಬಹುತೇಕ ಬೌದ್ಧಧರ್ಮೀಯರಾದರೂ ಹಿಂದೂ ಸಂಸ್ಕೃತಿಯ ಹಲವಾರು ಅಂಶಗಳನ್ನು ಪಡೆದಿದ್ದಾರೆ. ಚೀನೀ ಜನಾಂಗಕ್ಕೆ ಹತ್ತಿರದವರಾದ ಸಾಯ್ ಜನಾಂಗ 13ನೆಯ ಶತಮಾನದಲ್ಲಿ ಈಗಿನ ಥೈಲೆಂಡ್ ಪ್ರದೇಶದಲ್ಲಿ ರಾಜ್ಯ ಕಟ್ಟಿ, ಬೌದ್ಧಧರ್ಮಾವಲಂಬಿಗಳಾಗಿ, ಭಾರತದಿಂದ ಅಕ್ಷರಮಾಲೆಯನ್ನೂ ಭಾರತೀಯ ಸಂಸ್ಕೃತಿಯ ಇನ್ನೂ ಅನೇಕ ಅಂಶಗಳನ್ನೂ ಪಡೆದುಕೊಂಡರು. ಆಧುನಿಕ ಕಾಲದಲ್ಲಿ ಆಗ್ನೇಯ ಏಷ್ಯದಲ್ಲಿ ಥೈಲೆಂಡ್ ಮಾತ್ರ ಪಾಶ್ಚಾತ್ಯರ ನೇರವಸಾಹತು ಆಡಳಿತದಿಂದ ತಪ್ಪಿಸಿಕೊಂಡು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿತು. 

 ಪಾಶ್ಚಾತ್ಯ ಸಾಮ್ರಾಜ್ಯ 
15ನೆಯ ಶತಮಾನದ ಕೊನೆಗೆ ವಾಸ್ಕೋಡಗಾಮನ ನೇತೃತ್ವದಲ್ಲಿ ಪೋರ್ಚುಗೀಸ್ ನೌಕೆ ಗುಡ್ಹೋಪ್ ಭೂಶಿರದ ಮಾರ್ಗವಾಗಿ ಹಿಂದೂ ಮಹಾಸಾಗರವನ್ನು ಪ್ರವೇಶಿಸಿತು. ಏಷ್ಯದ ಆಧುನಿಕ ಇತಿಹಾಸದಲ್ಲಿ ಇದೊಂದು ಮುಖ್ಯ ಘಟನೆ. ಏಕೆಂದರೆ ಇಲ್ಲಿಂದಾಚೆಗೆ ಐರೋಪ್ಯರು ಏಷ್ಯವನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆಸಿದರು. ಈ ಘಟನೆ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಆರಂಭವಾಗುವುದಕ್ಕೆ ಸುಮಾರು 25 ವರ್ಷಗಳ ಹಿಂದೆ ನಡೆಯಿತು. ಚೀನದ ಕೊನೆಯ ಅರಸರಾದ ಮಂಚುಗಳು ಪ್ರಾಬಲ್ಯಕ್ಕೆ ಬರಲು ಇನ್ನೂ ಸುಮಾರು ಅರ್ಧ ಶತಮಾನವಿತ್ತು. ಪೋರ್ಚುಗೀಸರು ಹಿಂದೂ ಮಹಾಸಾಗರದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದಲ್ಲದೆ ಪುರ್ವಕ್ಕಿರುವ ಎಲ್ಲ ಸಮುದ್ರಗಳ ಮೇಲೂ ತಮ್ಮ ಹತೋಟಿಯನ್ನಿಟ್ಟುಕೊಂಡರು. ಪೋರ್ಚುಗೀಸರು ಹೋದಲ್ಲಿ ಅವರನ್ನು ಹಿಂಬಾಲಿಸಿ ಸ್ಪಾನಿಷರು, ಡಚ್ಚರು, ಫ್ರೆಂಚರು ಮತ್ತು ಇಂಗ್ಲಿಷರು ನಡೆದರು. ಎಲ್ಲಕ್ಕಿಂತ ಮಿಗಿಲಾಗಿ ಇವರೆಲ್ಲ ವ್ಯಾಪಾರವನ್ನೇ ಮುಖ್ಯ ಉದ್ದೇಶವನ್ನಾಗಿಟ್ಟು ಕೊಂಡಿದ್ದರು. ಏಷ್ಯದ ರೇಷ್ಮೆ ಮತ್ತು ಸಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದುವು. ವ್ಯಾಪಾರವನ್ನು ಹಿಂಬಾಲಿಸಿ ಪಾಶ್ಚಾತ್ಯರ ಧರ್ಮ ಬಂತು. ಕ್ರೈಸ್ತ ಧರ್ಮವನ್ನು ಹರಡಲು ಅನೇಕ ಪ್ರಯತ್ನಗಳು ನಡೆದುವು. ಪೋರ್ಚುಗೀಸರು ಈ ದಿಸೆಯಲ್ಲಿ ಎಲ್ಲರಿಗಿಂತ ಮಿಗಿಲಾಗಿ ಹೆಣಗಾಡಿದರು. 

ಪೋರ್ಚುಗೀಸರು ಗೋವ ಮತ್ತು ಮೆಕಾವ್ಗಳಲ್ಲೂ ಸ್ಪಾನಿಷರು ಫಿಲಿಪೀನ್ಸ್‌ನಲ್ಲೂ (1565) ತಮ್ಮ ಕೋಠಿಗಳನ್ನು ಕಟ್ಟಿದರು. ಐರೋಪ್ಯ ರಾಷ್ಟ್ರಗಳು ಮಧ್ಯೆ ಇದ್ದ ಪೈಪೋಟಿ ಏಷ್ಯಕ್ಕೂ ಹಬ್ಬಿತು. ಡಚ್ಚರು ಪೋರ್ಚುಗೀಸರನ್ನು ಓಡಿಸಿ ಜಾವ ದ್ವೀಪದಲ್ಲಿ ತಮ್ಮ ಸಾಂಬಾರು ಪದಾರ್ಥಗಳ ಒಂದು ಸಮ್ರಾಜ್ಯವನ್ನೇ ಕಟ್ಟಿದರು. ಕ್ರಮೇಣ ಸುಮಾತ್ರ ದ್ವೀಪವೂ ಅವರ ವಶವಾಗಿ, ಜಾವದ ಬಟೇವಿಯ ಡಚ್ಚರ ವಸಾಹತುಗಳ ಕೇಂದ್ರವಾಯಿತು. 1749 ಮತ್ತು 1805ರ ನಡುವಣ ಕಾಲದಲ್ಲಿ ಫ್ರೆಂಚರಿಗೂ ಬ್ರಿಟಿಷರಿಗೂ ಭಾರತದಲ್ಲಿ ಪ್ರಭಾವ ಗಳಿಸುವ ಸಲುವಾಗಿ ಯುದ್ಧಗಳು ನಡೆದುವು. ಆ ವೇಳೆಗೆ ಮೊಘಲ್ ಸಾಮ್ರಾಜ್ಯ ನಶಿಸಿಹೋಗಿ, ಒಂದು ಕೇಂದ್ರಾಡಳಿತವಿಲ್ಲದಂಥ ಪರಿಸ್ಥಿತಿ ಒದಗಿತ್ತು. ಇದರ ಜೊತೆಗೆ ಭಾರತೀಯರಲ್ಲೇ ಇದ್ದ ಪರಸ್ಪರ ಕಲಹಗಳು ಬ್ರಿಟಿಷರಿಗೆ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿತು. 19ನೆಯ ಶತಮಾನದಲ್ಲಿ ಬ್ರಿಟಿಷರು ಬಹು ಸುಲಭವಾಗಿ ಭಾರತವನ್ನೆಲ್ಲ ಜಯಿಸಿದರು. ಭಾರತದಲ್ಲಿ ಕಟ್ಟಿದ ಈ ಸಾಮ್ರಾಜ್ಯವನ್ನು ಕಾಪಾಡಲು, ಏಡನ್, ಪರ್ಷಿಯ, ಅರೇಬಿಯ, ಮಯನ್ಮಾರ್ ಮತ್ತು ಸಿಂಗಪುರಗಳಲ್ಲಿ ಕೋಟೆಕೊತ್ತಲಗಳನ್ನು ಕಟ್ಟಿದರು.

ಪರಾಜಿತರಾದ ಫ್ರೆಂಚರು ಭಾರತದಿಂದ ಪುರ್ವಕ್ಕೆ ಹೋಗಿ ಆಗ್ನೇಯ ಏಷ್ಯದ ಭಾಗಗಳಲ್ಲಿ ತಮ್ಮ ಪ್ರಭಾವ ಬೀರತೊಡಗಿದರು. ಮಯನ್ಮಾರ್ನಲ್ಲೂ ಸ್ವಲ್ಪ ಕಾಲ ತಮ್ಮ ಪ್ರಭಾವ ಸ್ಥಾಪಿಸಲು ಪ್ರಯತ್ನ ನಡೆಸಿದರು. ಬರ್ಮವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡು ಭಾರತದಲ್ಲಿದ್ದ ಬ್ರಿಟಿಷರೊಡನೆ ಹೋರಾಟ ನಡೆಸುವುದೆ ಇವರ ಉದ್ದೇಶವಾಗಿತ್ತು. ಆದರೆ ಫ್ರೆಂಚರ ಈ ಉದ್ದೇಶ ಪುರ್ಣವಾಗಲಿಲ್ಲ. ಕಡೆಗೆ ಫ್ರೆಂಚರು ಕೊಚಿನ್, ಚೀನ, ಅಸ್ಸಾಂ, ಟಾಂಕಿಂಗ್, ಲಾವೋಸ್ ಮತ್ತು ಕಾಂಬೋಡಿಯಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಆ ಪ್ರದೇಶದಲ್ಲಿ ಆಳುತ್ತಿದ್ದ ರಾಜರು ಫ್ರೆಂಚರ ಅಧೀನರಾಗಿ ಅವರ ಪೋಷಣೆಗೆ ಒಳಪಟ್ಟರು. ಆಗ್ನೇಯ ಏಷ್ಯದಲ್ಲಿ ಥೈಲೆಂಡ್ ಅಥವಾ ಸಯಾಂ ಮಾತ್ರ ಪಾಶ್ಚಾತ್ಯರ ವಸಾಹತು ನೀತಿಗೆ ತುತ್ತಾಗದೆ ತನ್ನ ಸ್ವಾತಂತ್ರ್ಯ ಕಾಪಾಡಿಕೊಂಡಿತು. ಥೈಲೆಂಡಿನ ಅಕ್ಕಪಕ್ಕಗಳಲ್ಲಿದ್ದ ಫ್ರೆಂಚರೂ ಬ್ರಿಟಿಷರೂ ಆ ದೇಶ ತಮ್ಮಿಬ್ಬರ ಪ್ರಭಾವ ವಲಯಗಳ ನಡುವಿನ ಪ್ರದೇಶವಾಗಿ ಸ್ವತಂತ್ರವಾಗಿ ಇರಬೇಕೆಂದು ಒಪ್ಪಂದ ಮಾಡಿಕೊಂಡಿದ್ದೇ ಇದಕ್ಕೆ ಕಾರಣ.

ಪಶ್ಚಿಮ ಏಷ್ಯದಲ್ಲಿ ಆಟೋಮನ್ನರ ಸಾಮ್ರಾಜ್ಯ ಪ್ರಭಾವಶಾಲಿಯಾಗಿತ್ತು. ಆದರೆ 16ನೆಯ ಶತಮಾನದಿಂದೀಚೆಗೆ ಆ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಿತ್ತು. 1882ರಲ್ಲಿ ಬ್ರಿಟಿಷರು ಆ ಸಾಮ್ರಾಜ್ಯದ ಅಧೀನದಲ್ಲಿದ್ದ ಈಜಿಪ್ಟನ್ನು ತಮ್ಮ ಹತೋಟಿಗೆ ತಂದುಕೊಂಡರು. ಈಜಿಪ್ಟ್‌ ಬ್ರಿಟನಿನ ವ್ಯಾಪಾರ ಮಾರ್ಗಕ್ಕೆ ಅತ್ಯಂತ ಆವಶ್ಯಕವಾಗಿತ್ತು. ಸೂಯೆeóï ಕಾಲುವೆ ರಚಿಸಿದ ಅನಂತರ ಈಜಿಪ್ಟಿನ ಉಪಯೋಗ ಹೆಚ್ಚಿತು. ಆಮೇಲೆ ಬ್ರಿಟಿಷರು ತಮ್ಮ ಹತೋಟಿಯನ್ನು ಇಟ್ಟುಕೊಳ್ಳುವ ಸಲುವಾಗಿ ಈಜಿಪ್ಟನ್ನು ತಮ್ಮ ಪ್ರಭಾವ ವಲಯದೊಳಕ್ಕೆ ತಂದುಕೊಂಡರು. ಫ್ರೆಂಚರು ಸಿರಿಯದಲ್ಲಿ ತಮ್ಮ ಪ್ರಭಾವವನ್ನು ಸ್ಥಾಪಿಸಿದರು. ದೂರ ಪ್ರಾಚ್ಯ ದೂರವಿದ್ದುದ್ದರಿಂದಲೊ ಏನೊ, ಸ್ವಲ್ಪ ಕಾಲ ಪಾಶ್ಚಾತ್ಯರ ವಸಾಹತು ನೀತಿಗೆ ತುತ್ತಾಗದೆ ಉಳಿದಿತ್ತು. ಆದರೆ 1842ರಿಂದಾಚೆಗೆ ಚೀನ ದೇಶ ಪಾಶ್ಚಾತ್ಯರಿಗೆ ವ್ಯಾಪಾರಕ್ಕಾಗಿ ತನ್ನ ಬಾಗಿಲು ತೆಗೆಯಬೇಕಾಯಿತು. ಚೀನೀಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಹೆಚ್ಚಿನ ರಿಯಾಯಿತಿಗಳು 1930ರ ದಶಕದವರೆಗೆ ನಡೆದುಕೊಂಡು ಬಂದುವು. ಇವಕ್ಕೆಲ್ಲ ಚೀನ ದೇಶವನ್ನು 1911ರ ವರೆಗೆ ಆಳಿದ ಮಂಚುಗಳೇ ಕಾರಣವೆನ್ನಬಹುದು. ಅನಂತರ ಸ್ಥಾನಮಾನಗಳಿಗಾಗಿ ನಡೆದ ಆಂತರಿಕ ಕಲಹಗಳಿಂದ ಚೀನ ತನ್ನ ಸಂಪುರ್ಣ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಕಾಲದಲ್ಲೇ ರಷ್ಯ ಉತ್ತರ ಮತ್ತು ಮಧ್ಯ ಏಷ್ಯಗಳಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸುವ ಪ್ರಯತ್ನ ನಡೆಸಿತು. ಸೈನ್ಯಬಲ, ರಾಜಕೀಯ ಕುಟಿಲನೀತಿ ಮತ್ತು ವಸಾಹತುಗಳ ಸ್ಥಾಪನೆ-ಇವೇ ರಷ್ಯನ್ನರ ಅಸ್ತ್ರಗಳಾಗಿದ್ದುವು. 1900ರ ವೇಳೆಗೆ ರಷ್ಯ ಪೆಸಿಫಿಕ್ ಮಹಾಸಾಗರದ ತೀರದವರೆಗೆ ತನ್ನ ಹತೋಟಿ ಹಬ್ಬಿಸಿತ್ತು. ಚೀನ ಮತ್ತು ಕೊರಿಯಗಳು ರಷ್ಯನ್ನರ ಈ ಮುನ್ನುಗ್ಗುವಿಕೆಯಿಂದ ತತ್ತರಿಸಿದುವು.

 ಏಷ್ಯದ ಜಾಗೃತಿ 
 19ನೆಯ ಶತಮಾನದ ಶತಮಾನದ ಇತಿಹಾಸ ಮುಖ್ಯವಾಗಿ ಪಾಶ್ಚಾತ್ಯರು ಏಷ್ಯದಲ್ಲಿ ವಿವಿಧ ರೀತಿನೀತಿಗಳೀಂದ, ಕುಟಿಲೋಪಾಯಗಳಿಂದ ಹೇಗೆ ತಮ್ಮ ಪ್ರಭಾವ (ರಾಜಕೀಯ, ಸಾಮಾಜಿಕ, ಹಾಗೂ ಧರ್ಮೀಯ) ಸ್ಥಾಪಿಸಿದರು ಎಂಬುದನ್ನು ತೋರಿಸಿದರೆ, 20ನೆಯ ಶತಮಾನದ ಏಷ್ಯದ ಇತಿಹಾಸ, ಏಷ್ಯ ಹೇಗೆ ಇಂಥ ಬಂಧನದಿಂದ ಮುಕ್ತವಾಗಿ ತನ್ನದೇ ಆದ ಆದರ್ಶಗಳನ್ನು ರೂಪಿಸಿಕೊಳ್ಳತೊಡಗಿತು ಎಂಬುದನ್ನು ತೋರಿಸುತ್ತದೆ. 20ನೆಯ ಶತಮಾನದ ಹೊತ್ತಿಗೆ ಏಷ್ಯದ ವಿವಿಧ ಜನಾಂಗದವರು ಯುರೋಪಿನ ವಿರುದ್ಧ ಎಚ್ಚೆತ್ತು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧರಾದರು. ಏಷ್ಯದಲ್ಲಿ ಮೊತ್ತಮೊದಲ ಬಾರಿಗೆ ಜಪಾನ್ ಯುರೋಪಿನಿಂದಲೇ ಪಾಠ ಕಲಿತು, ಅದರ ಅಸ್ತ್ರಗಳಿಂದಲೇ ಎದುರಿಸುವ ಸಿದ್ಧತೆ ನಡೆಸಿತು. 1868ರಿಂದೀಚೆಗೆ ಅನೇಕ ಸುಧಾರಣೆಗಳನ್ನು ಮಾಡಿ ಜಪಾನ್ ಆಧುನಿಕ ರಾಷ್ಟ್ರವಾಯಿತು. ಹೊಸದಾಗಿ ಸೃಷ್ಟಿಸಿದ ಈ ಬಲವನ್ನು 1894-95ರಲ್ಲಿ ಚೀನದ ವಿರುದ್ಧವಾಗಿಯೂ 1904-05ರಲ್ಲಿ ರಷ್ಯದ ವಿರುದ್ಧವಾಗಿಯೂ ಪ್ರಯೋಗಿಸಿ, ಆ ದೇಶಗಳನ್ನು ಸೋಲಿಸಿದ್ದು ಒಂದು ಮಹಾಸಾಧನೆ. ಪಾಶ್ಚಾತ್ಯರಂತೆ ಜಪಾನ್ ಸಹ ಏಷ್ಯದಲ್ಲಿ ವಸಾಹತುಗಳನ್ನು ಸ್ಥಾಪಿಸುವ ಪ್ರಯತ್ನ ನಡೆಸಿತು. ಮೇಲೆ ತಿಳಿಸಿದ ಎರಡು ಯುದ್ಧಗಳ ಪರಿಣಾಮವಾಗಿ ಫಾರ್ಮೋಸ, ಕೊರಿಯ ಮತ್ತು ಮಂಚೂರಿಯಗಳಲ್ಲಿ ಜಪಾನ್ ತನ್ನ ಪ್ರಭಾವ ಸ್ಥಾಪಿಸಿತು. 1945ರಲ್ಲಿ ಎರಡನೆಯ ಮಹಾಯುದ್ಧದಲ್ಲಿ ಸಂಪುರ್ಣ ಸೋಲನ್ನು ಅನುಭವಿಸುವವರೆಗೂ ಜಪಾನಿನ ಈ ಕನಸಿಗೆ ತಡೆಯೇ ಇರಲಿಲ್ಲ.

ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕದಿಂದ ಏಷ್ಯನ್ ರಾಷ್ಟ್ರಗಳಲ್ಲಿ ಒಂದು ಜಾಗೃತಿ ಯುಂಟಾಯಿತು. ಜಪಾನ್ ರಷ್ಯದ ಮೇಲೆ ಗಳಿಸಿದ ವಿಜಯವೂ (1905) ಚೀನ ದೇಶದ ಕ್ರಾಂತಿಯೂ ಸುಧಾರಣಾ ಚಳವಳಿಯೂ (1911) ಪ್ರಪಂಚದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ನಡೆದ ಅಹಿಂಸಾತ್ಮಕ ಚಳವಳಿಯೂ ಏಷ್ಯದ ಇತರ ರಾಷ್ಟ್ರಗಳ ನಾಯಕರನ್ನು ಹುರಿದುಂಬಿಸಿದುವು. ರಷ್ಯದಲ್ಲಿ ಸಂಭವಿಸಿದ ಕ್ರಾಂತಿಯಿಂದ ಏಷ್ಯದ ರಾಷ್ಟ್ರಗಳ ಮೇಲೂ ಪರಿಣಾಮವಾಗದಿರಲಿಲ್ಲ.

ಎರಡನೆಯ ಮಹಾಯುದ್ಧದ ಪರಿಣಾಮವೂ ಅಲ್ಪವೇನಲ್ಲ. ಇದರಿಂದ ಪಾಶ್ಚಾತ್ಯ ಸಾಮ್ರಾಜ್ಯಷಾಹಿಗೆ ಬಲವಾದ ಪೆಟ್ಟು ಬಿತ್ತು. ಭಾರತದ ವಿಭಜನೆ ಮತ್ತು ಸ್ವಾತಂತ್ರ್ಯ ಸಂಪಾದನೆ, ಬರ್ಮ, ಮಲೆಯ, ಇಂಡೊನೇಷ್ಯ ಮುಂತಾದ ರಾಷ್ಟ್ರಗಳ ವಿಮೋಚನೆ, ಇಂಡೋ-ಚೀನ ಪ್ರದೇಶದ ರಾಜ್ಯಗಳಿಗೆ ಸ್ವಾತಂತ್ರ್ಯದಾನ, ಫಿಲಿಪೀನ್ಸಿನ ಬಿಡುಗಡೆ, ಚೀನದಲ್ಲಿ ಕಮ್ಯೂನಿಸ್ಟ್‌ ಪ್ರಭುತ್ವ ಸ್ಥಾಪನೆ, ವಿಯೆಟ್ನಾಂ ಕಲಹ, ಪಶ್ಚಿಮ ಏಷ್ಯದ ಅಸ್ಥಿರ ರಾಜಕೀಯ-ಇವು ಕೆಲವು ಮುಖ್ಯ ಘಟನೆಗಳು.

ಪಾಶ್ಚಾತ್ಯ ರಾಷ್ಟ್ರಗಳು ದಾಸ್ಯದಿಂದ ಬಿಡುಗಡೆಯಾದ ಮೇಲೆ ಏಷ್ಯದ ರಾಷ್ಟ್ರಗಳೂ ಆಧುನಿಕ ರೀತಿಯಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಪ್ರಯತ್ನ ನಡೆಸಿದುವು. ಹಳೆಯ ಸಂಸ್ಕೃತಿಯನ್ನು ಸಂಪುರ್ಣವಾಗಿ ಕೈಬಿಡದೆ, ಪಾಶ್ಚಾತ್ಯರಿಂದ ಕಲಿಯ ಬಹುದಾದ ಆಧುನಿಕ ಭಾವನೆಗಳನ್ನು ಕಲಿತು ಮುಂದುವರಿಯಲು ಏಷ್ಯ ಯತ್ನಿಸಿತು. ಆಧುನಿಕ ಏಷ್ಯದಲ್ಲಿ ಪುರ್ವ-ಪಶ್ಚಿಮಗಳ ಸಂಗಮವನ್ನು ನೋಡಬಹುದಾಗಿದೆ. ಅಷ್ಟಾದರೂ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಳು ರಾಜಕೀಯ ಬದಲಾವಣೆಯಷ್ಟೇ ವೇಗದಿಂದ ನಡೆಯುತ್ತಿಲ್ಲ. ಇದೊಂದು ಸಮಸ್ಯೆ. ಪಾಶ್ಚಾತ್ಯ ಪ್ರಜಾಪ್ರಭುತ್ವ, ಕಮ್ಯೂನಿಸ್ಟ್‌ ವ್ಯವಸ್ಥೆ ಇವುಗಳ ನಡುವೆ ಏಷ್ಯದ ರಾಷ್ಟ್ರಗಳು ಉಯ್ಯಾಲೆಯಾಡುತ್ತಿವೆ. ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಶೀಘ್ರವಾಗಿ ಮುಂದುವರಿಯಲಾಗದ ದೇಶಗಳು ಸರ್ವಾಧಿಕಾರಕ್ಕೂ ಎಡೆಗೊಡುತ್ತಿವೆ. 				         (ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ